ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ತಟ್ಟೆಗಳಾದ ಅಡಿಕೆ ಎಲೆ ತಟ್ಟೆಗಳಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಅಡಿಕೆಎಲೆ ತಟ್ಟೆ ತಯಾರಿಕಾ ಉದ್ಯಮ ವಲಯದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಈ ನಿರ್ಧಾರದಿಂದ ನೂರಾರು ಘಟಕಗಳು ಹಾಗೂ ಸಾವಿರಾರು ಗ್ರಾಮೀಣ ಮಹಿಳಾ ಕಾರ್ಮಿಕರು ತಮ್ಮ ಜೀವನೋಪಾಯ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.
ಪರಿಸರ ಸ್ನೇಹಿ ತಟ್ಟೆಗಳು:
ಅಡಿಕೆ ಎಲೆಗಳಿಂದ ತಯಾರಿಸಲಾಗುವ ಈ ತಟ್ಟೆಗಳು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಪ್ಲಾಸ್ಟಿಕ್ ಮತ್ತು ಥರ್ಮೋಕೊಲ್ ತಟ್ಟೆಗಳಿಗೆ ಪರ್ಯಾಯವಾಗಿ ಬಳಸಲಾಗುತ್ತವೆ. ಈ ತಟ್ಟೆಗಳು ಮಣ್ಣು ಹಾಗೂ ಪ್ರಕೃತಿಯಲ್ಲಿ ಸುಲಭವಾಗಿ ವಿಲೀನಗೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಪರಿಸರದ ಮೇಲೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.
ದಾವಣಗೆರೆ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಈ ತಟ್ಟೆಗಳ ಉತ್ಪಾದನೆಯು ದಶಕದ ಹಿಂದೆ ಪ್ರಾರಂಭವಾಗಿ, ಇಂದು ಸಾವಿರಾರು ಕುಟುಂಬಗಳಿಗೆ ಪರೋಕ್ಷವಾಗಿ ಜೀವನಾಧಾರವಾಗಿದೆ. ಸುಮಾರು 500ಕ್ಕೂ ಹೆಚ್ಚು ಘಟಕಗಳು ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಪ್ರತಿದಿನವೂ ಸಾವಿರಾರು ಅಡಿಕೆ ಎಲೆ ತಟ್ಟೆಗಳು ದೇಶವಿದೇಶಗಳಿಗೆ ರಫ್ತು ಆಗುತ್ತಿವೆ.
Join Whatsapp Group NammaDavangere 04
Join Whatsapp Group NammaDavangere 05
ಅಮೆರಿಕದ ಇಂಪೋರ್ಟ್ ಬ್ಯಾನ್ ನಿರ್ಧಾರ ಮಾರುಕಟ್ಟೆಗೆ ಆಘಾತ:
ಮೇ 8ರಿಂದ ಅಮೆರಿಕ ಸರ್ಕಾರ ಈ ತಟ್ಟೆಗಳ ಆಮದು ನಿಷೇಧಿಸಿದ್ದು, “ಅಡಿಕೆ ಎಲೆಗಳಲ್ಲಿ ಕೆಲವೊಂದು ಅಲ್ಕಲಾಯ್ಡ್ ಅಂಶಗಳು ಕ್ಯಾನ್ಸರ್ ಉಂಟುಮಾಡಬಹುದು” ಎಂಬ ಕಾರಣ ನೀಡಿದೆ. ಆದರೆ, ತಜ್ಞರು ಮತ್ತು ಉದ್ಯಮಸ್ಥರು ಈ ಮಾಹಿತಿಯನ್ನು ವೈಜ್ಞಾನಿಕವಾಗಿ ಸರಿಯಾಗಿಲ್ಲವೆಂದು ಪ್ರತಿಪಾದಿಸುತ್ತಿದ್ದಾರೆ.
ಇತರೆ ರಾಷ್ಟ್ರಗಳಿಂದಲೂ ಬ್ಯಾನ್ ಆಗುವ ಆತಂಕ:
ಈಗಾಗಲೇ ಅಮೆರಿಕ ನಿಷೇಧ ಹೇರಿರುವುದು ದುಃಖದ ಸಂಗತಿ. ಆದರೆ, ಇಂಗ್ಲೆಂಡ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಸಹ ಇದೇ ಮಾರ್ಗ ಅನುಸರಿಸಿದರೆ, ಉದ್ಯಮ ಸಂಪೂರ್ಣ ಕುಸಿತಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕ ಉದ್ಯಮಿಗಳಲ್ಲೂ ಇದೆ. ಪ್ರಸ್ತುತ ಕನಿಷ್ಠ 17 ದೇಶಗಳಿಗೆ ಅಡಿಕೆ ತಟ್ಟೆಗಳನ್ನು ರಫ್ತು ಮಾಡಲಾಗುತ್ತಿದೆ.
ಕಂಗಾಲಾಗಿರುವ ಕಾರ್ಮಿಕರು:
ಈ ಉದ್ಯಮದಲ್ಲಿ ಪ್ರಮುಖವಾಗಿ ಗ್ರಾಮೀಣ ಮಹಿಳೆಯರು ನಿಗದಿತ ಸಂಬಳದೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅರ್ಧಪರಿಣತಿ ಕಾರ್ಮಿಕರಿಗೆ ₹6,000 ರಿಂದ ₹8,000 ಹಾಗೂ ಪರಿಣಿತರಿಗೆ ₹12,000-₹15,000 ವರೆಗೆ ಸಂಬಳ ನೀಡಲಾಗುತ್ತಿತ್ತು. ಆದರೆ ಇದೀಗ ನಿಷೇಧದ ಹಿನ್ನೆಲೆಯಲ್ಲಿ ಹಲವಾರು ಘಟಕಗಳು ತಮ್ಮ ಕಾರ್ಯಚಟುವಟಿಕೆಗೆ ವಿರಾಮ ನೀಡಲು ಸಿದ್ಧವಾಗಿವೆ.
ಆಕರ್ಷಕ ರೂಪಗಳಲ್ಲಿ ಲಭ್ಯ:
ಈ ತಟ್ಟೆಗಳು ಸಾಮಾನ್ಯವಾಗಿ 6 ಇಂಚು, 8 ಇಂಚು, 10 ಇಂಚು ಹಾಗೂ 12 ಇಂಚು ಗಾತ್ರಗಳಲ್ಲಿ ಲಭ್ಯವಿದ್ದು, ವೃತ್ತಾಕಾರ ಮತ್ತು ಚೌಕಾಕಾರದ ವಿನ್ಯಾಸದಲ್ಲಿ ತಯಾರಿಸಲಾಗುತ್ತದೆ. ಇವುಗಳಲ್ಲಿ ತಂಪು ಹಾಗೂ ಬಿಸಿ ಆಹಾರ ಬಡಿಸಲು ಹಾಗೂ ಪಾರ್ಟಿಗಳು, ಮದುವೆ, ಧಾರ್ಮಿಕ ಸಮಾರಂಭಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತವೆ. ಅಡಿಕೆ ಎಲೆ ತಟ್ಟೆಗಳನ್ನು ಬಳಸಿ ತಕ್ಷಣವೇ ಮರುಬಳಕೆ ಮಾಡಬಹುದಾಗಿದ್ದು, ಪ್ಲಾಸ್ಟಿಕ್ ತಟ್ಟೆಗಳಂತೆ ಪರಿಸರಕ್ಕೆ ಹಾನಿಕಾರಕವಲ್ಲ. ಕೆಲ ಸಮಯದೊಳಗೆ ಮಣ್ಣಿನಲ್ಲಿ ಪೂರ್ಣವಾಗಿ ಜೀರ್ಣಗೊಳ್ಳುವ ಗುಣವು ಇವುಗಳಲ್ಲಿ ಇರುವುದು ವಿಶೇಷ.

ಸರ್ಕಾರದ ಮಧ್ಯಸ್ಥಿಕೆಗೆ ಆಗ್ರಹ:
ಈ ನಿಷೇಧದಿಂದಾಗಿ ಉದ್ಯಮ ಸಂಪೂರ್ಣ ಕುಸಿತದ ಕಡೆಗೆ ಸಾಗುವ ಮುನ್ಸೂಚನೆ ಕಂಡುಬರುತ್ತಿದ್ದು, ಅಡಿಕೆ ಎಲೆ ತಟ್ಟೆ ತಯಾರಕರ ಸಂಘ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಮನವಿ ಸಲ್ಲಿಸಿದೆ. ಅಮೆರಿಕ ಸರ್ಕಾರದೊಂದಿಗೆ ಮಾತುಕತೆ ನಡೆಸಿ ನಿಷೇಧ ಹಿಂಪಡುವಂತೆ ಆಗ್ರಹಿಸಿದ್ದಾರೆ. ನಿಷೇಧದ ಕಾರಣಗಳ ಪುನರ್ ಪರಿಶೀಲನೆ, ಮತ್ತು ಪರ್ಯಾಯ ರಫ್ತು ಮಾರುಕಟ್ಟೆಗಳ ಅನ್ವೇಷಣೆಯೊಂದಿಗೆ ಈ ಪರಿಸ್ಥಿತಿಗೆ ಪರಿಹಾರ ಹುಡುಕಬೇಕಾಗಿದೆ.




