ದಾವಣಗೆರೆ, ಆ. 23: ದಾವಣಗೆರೆ ನಗರದಲ್ಲಿ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘನೆ ಮಾಡಿದ ಶಾಲಾ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ಅವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ, ಸಂಚಾರ ಸಿಪಿಐ ಶ್ರೀ ನಲವಾಗಲು ಮಂಜುನಾಥ ಅವರ ನೇತೃತ್ವದಲ್ಲಿ ಇಂದು ಕಾರ್ಯಾಚರಣೆ ನಡೆದಿದೆ.
Join Whatsapp Group NammaDavangere 04
Join Whatsapp Group NammaDavangere 05
ಈ ಸಂದರ್ಭದಲ್ಲಿ 4 ಶಾಲಾ ವ್ಯಾನ್‌ಗಳು ಮತ್ತು 27 ಆಟೋ ರಿಕ್ಷಾಗಳು — ಒಟ್ಟು 31 ವಾಹನಗಳು ಪರ್ಮಿಟ್ ಮಿತಿಗಿಂತ ಹೆಚ್ಚು ಮಕ್ಕಳನ್ನು ಅಸುರಕ್ಷಿತವಾಗಿ ಸಾಗಿಸುತ್ತಿದ್ದ ಕಾರಣ ವಶಕ್ಕೆ ಪಡೆಯಲಾಗಿದೆ. ವಾಹನಗಳನ್ನು ದಾವಣಗೆರೆ ದಕ್ಷಿಣ ಹಾಗೂ ಉತ್ತರ ಸಂಚಾರ ಠಾಣೆಗಳಲ್ಲಿ ಕಾಯ್ದಿರಿಸಿ, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಂಚಾರ ಠಾಣೆಯ ಪಿಎಸ್ಐಗಳಾದ ಶ್ರೀ ಮಹಾದೇವ ಬತ್ತೆ, ಶ್ರೀಮತಿ ಜಯಶೀಲ, ಶ್ರೀಮತಿ ಶೈಲಜಾ, ಶ್ರೀಮತಿ ನಿರ್ಮಲ ಹಾಗೂ ಎಎಸ್‌ಐ ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ಅವರು ಪೋಷಕರಿಗೂ, ಚಾಲಕರಿಗೂ ಅರಿವು ಮೂಡಿಸಿ ಎಚ್ಚರಿಕೆ ನೀಡಿದ್ದಾರೆ. ಅವರು ಹೇಳಿದರು:
- ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವಾಗ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಕೂರಿಸಬಾರದು.
- ವಾಹನ ಚಾಲಕರೂ ಸಹ ನಿಯಮಗಳನ್ನು ಉಲ್ಲಂಘಿಸಿ ಮಕ್ಕಳನ್ನು ಅಪಾಯಕರವಾಗಿ ಸಾಗಿಸಬಾರದು.
- ನಿಯಮ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು.
ಕಾನೂನು ಬಾಹಿರವಾಗಿ ಆಟೋಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ 02 ಆಟೋಗಳನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರು ತಡೆದು ಜಿಲ್ಲಾ ಪೊಲೀಸ್ ಕಛೇರಿ ಬಳಿ ಕರೆಯಿಸಿ ಪರಿಶೀಲಿಸಿದ್ದು ಒಂದು ಆಟೋದಲ್ಲಿ 14 ಶಾಲಾ ಮಕ್ಕಳು ಇನ್ನೊಂದು ಆಟೋದಲ್ಲಿ 11 ಶಾಲಾ ಮಕ್ಕಳು ಇದ್ದು, ಆಟೋ ಚಾಲಕರುಗಳಿಗೆ ಕಾನೂನು ಬಾಹಿರವಾಗಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಂಚಾರ ನಿಯಮಗಳ ಉಲ್ಲಂಘನೆ ಆಗಿರುತ್ತದೆ ಅಲ್ಲದೇ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೂಡ ಗಂಭೀರ ವಿಷಯವಾಗಿರುತ್ತದೆ. ಇನ್ನು ಮುಂದೆ ಆಟೋಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದು, ಉತ್ತರ ಸಂಚಾರ ಠಾಣೆಯ ಪೊಲೀಸರು ಸದರಿ 2 ಆಟೋ ಗಳನ್ನು ವಶಕ್ಕೆ ಪಡೆದಿದ್ದು, ಆಟೋ ಚಾಲಕರ ವಿರುದ್ಧ 02 ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿರುತ್ತಾರೆ.
ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಸದರಿ ಆಟೋಗಳಲ್ಲಿದ್ದ ಶಾಲಾ ಮಕ್ಕಳನ್ನು ಕಛೇರಿಯಲ್ಲಿ ಕೂರಿಸಿಕೊಂಡು ಉಪಚರಿಸಿದ್ದು, ಸದರಿ ಮಕ್ಕಳ ಪೋಷಕರುಗಳನ್ನು ಕರೆಯಿಸಿ ಶಾಲಾ ಮಕ್ಕಳನ್ನು ನಿರ್ಲಕ್ಷ್ಯ ವಹಿಸಿ ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚುವರಿಯಾಗಿ ಮಕ್ಕಳನ್ನು ಆಟೋಗಳಲ್ಲಿ ಕಳುಹಿಸಬಾರದು ಹಾಗೂ ಅದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ ಜವಾಬ್ದಾರಿಯುತ ನಾಗರಿಕರಾಗಿ ಹಾಗೂ ಪೋಷಕರಾಗಿ ವರ್ತಿಸಬೇಕು ಎಂದು ತಿಳಿ ಹೇಳಿ, ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು. ನಂತರ ಮಕ್ಕಳನ್ನು ಅವರ ಪೋಷಕರುಗಳೊಂದಿಗೆ ಕಳುಹಿಸಿಕೊಡಲಾಯಿತು.
ಮಕ್ಕಳ ಜೀವವೇ ಮುಖ್ಯ – ನಿಯಮ ಪಾಲನೆ ಕಡ್ಡಾಯ.




